ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸ೦ದರ್ಶನ
Share
ಯಕ್ಷ-ಗಾನ-ಯಾನ : ಬಾರ್ಕೂರು ಸುರೇಶ ಭಾಗವತರ ಸಂದರ್ಶನ

ಲೇಖಕರು :
ರಾಘವೇಂದ್ರ ಅಡಿಗ ತೀರ್ಥಹಳ್ಳಿ
ಗುರುವಾರ, ಮಾರ್ಚ್ 19 , 2015

ಯಕ್ಷಗಾನ ಒಂದು ವಿಶ್ವವಿಖ್ಯಾತ ಕಲೆ. ಗಾನ-ನೃತ್ಯ-ಮಾತುಗಾರಿಕೆ-ವೇಷ ಭೂಷಣಗಳ ಮೇಳೈಕೆ ಈ ಯಕ್ಷಗಾನ. ಇದರಲ್ಲಿ ಪದ್ಯ ಹೇಳುವ ಭಾಗವತರದ್ದು ನಿರ್ದೇಶಕರ ಕೆಲಸ. ನಿರ್ದೇಶನ-ಸಮಯಪ್ರಜ್ಞೆ-ಸೃಜನಶೀಲತೆ ಮುಂತಾದ ಗುಣಗಳು ಇದ್ದಲ್ಲಿ ಮಾತ್ರ ಒಬ್ಬ ಯಶಸ್ವೀ ಭಾಗವತರಾಗುವುದಕ್ಕೆ ಸಾಧ್ಯ. ನಮ್ಮ ನಡುವೆ ಇಂತಹ ನೂರಾರು ಭಾಗವತರಿದ್ದಾರೆ. ಅವರಲ್ಲಿ ಕೆಲವರು ಪ್ರಸಿದ್ಧಿಯನ್ನು ಪಡೆದರೆ, ಇನ್ನೂ ಕೆಲವರು ಎಲೆ ಮರೆಯ ಕಾಯಿಯಂತೆ ಯಕ್ಷಕಲಾ ಸೇವೆಯಲ್ಲಿ ತೊಡಗಿದ್ದಾರೆ. ಅಂತವರಲ್ಲಿ ಒಬ್ಬರು ಶ್ರೀ ಬಾರ್ಕೂರು ಸುರೇಶ ಭಾಗವತರು.

ಬಾರ್ಕೂರು ಸುರೇಶ ಭಾಗವತರು 1962ನೇ ಇಸವಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲೂಕಿನ ಬಾರ್ಕೂರಿನಲ್ಲಿ ಜಗನ್ನಾಥ ರಾಯರು ಹಾಗೂ ಕಮಲಮ್ಮ ದಂಪತಿಗಳ ಒಂಬತ್ತನೆಯ ಮಗನಾಗಿ ಜನಿಸಿದರು. 1983ರಿಂದ, ಅಂದರೆ ಕಳೆದ 32 ವರ್ಷಗಳಿಂದ ರಂಗಸ್ಥಳದಲ್ಲಿ ತಮ್ಮ ಇಂಪಾದ ಗಾನವನ್ನು ಹರಿಸುತ್ತಿರುವ ಬಾರ್ಕೂರು ಸುರೇಶ ಭಾಗವತರೊಂದಿಗೆ ನಡೆಸಿದ ಸಂದರ್ಶನ.


*********************

ಸ೦ದರ್ಶಕರು : ರಾಘವೇಂದ್ರ ಅಡಿಗ ತೀರ್ಥಹಳ್ಳಿ, ಬೆಂಗಳೂರು



ಪ್ರಶ್ನೆ : ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆಯಲು ಕಾರಣವೇನು?

ಸುರೇಶ ಭಾಗವತ : ಚಿಕ್ಕಂದಿನಲ್ಲಿ ನಮ್ಮ ಊರಿನ ಸುತ್ತ ನಡೆಯುವ ಯಕ್ಷಗಾನವನ್ನು ನೋಡಲು ಹೋಗುತ್ತಿದ್ದೆ. ಮನೆಯಲ್ಲೂ ಕೂಡ ಯಕ್ಷಗಾನದ ಪ್ರಭಾವ ಇದ್ದಿದ್ದರಿಂದ ಸಹಜವಾಗಿ ಯಕ್ಷಗಾನದತ್ತ ಆಕರ್ಷಿತನಾದೆ. ವೇಷ, ನೃತ್ಯ, ಗಾಯನಗಳು ನನ್ನ ಮೇಲೆ ಪ್ರಭಾವ ಬೀರಿತು.

ಪ್ರಶ್ನೆ : ವೃತ್ತಿ ರಂಗಕ್ಕೆ ಬಂದ ದಾರಿ ಹೇಗಿತ್ತು?

ಸುರೇಶ ಭಾಗವತ : 1980ರಿಂದ 1983ರವರೆಗೆ ಗುರುಗಳಾದ ನೀಲಾವರ ರಾಮಕೃಷ್ಣಯ್ಯನವರಲ್ಲಿ ಅಭ್ಯಾಸ ಮಾಡಿ, 1983ರಲ್ಲಿ, ಅಂದರೆ 22ನೇ ವಯಸ್ಸಿನಲ್ಲಿ ಭಾಗವತನಾಗಿ ರಂಗಸ್ಥಳಕ್ಕೆ ಪಾದಾರ್ಪಣೆ ಮಾಡಿದೆ. ಬಾರ್ಕೂರಿನ ಪುರಾಣ ಪ್ರಸಿದ್ಧ ಶ್ರೀ ಸೋಮನಾಥೇಶ್ವರ ದೇವಾಲಯದ ಪ್ರಾಂಗಣದ ಜಗುಲಿಯಲ್ಲಿ ನನ್ನ ಭಾಗವತಿಕೆಯ ಅಭ್ಯಾಸ ನಡೆಯುತ್ತಿತ್ತು. ಹಿರಿಯರಾದ ವಿ.ವಿ ನಾಯಕ್ ರವರ ಪ್ರೋತ್ಸಾಹ-ಮಾರ್ಗದರ್ಶನ ನನಗೆ ಭಾಗವತಿಕೆಯನ್ನು ಒಂದು ವೃತ್ತಿಯಾಗಿ ನಿರ್ವಹಿಸಲು ಸಹಾಯಕವಾಯಿತು.

ಪ್ರಶ್ನೆ : ಯಕ್ಷಗಾನದ ನಿಮ್ಮ ಮೆಚ್ಚಿನ ಕಲಾವಿದರು ಯಾರು?

ಸುರೇಶ ಭಾಗವತ : ಚಿಟ್ಟಾಣಿ ರಾಮಚಂದ್ರ ಹೆಗಡೆಯವರು, ಕಾಳಿಂಗ ನಾವಡರು, ಕಡತೋಕಾ ಮಂಜುನಾಥ ಭಾಗವತರು, ಜಾನುವಾರುಕಟ್ಟೆ ಭಾಗವತರು ನನ್ನ ಮೆಚ್ಚಿನ ಕಲಾವಿದರು. ಕಾಳಿಂಗ ನಾವಡರು ಬದುಕಿದ್ದಾಗ ಅವರೊಂದಿಗಿನ ಒಡನಾಟ ನನ್ನ ಜೀವನದ ಸೌಭಾಗ್ಯವೇ ಸರಿ.

ಪ್ರಶ್ನೆ : ಗಾನ ಯಾನದ ಪಯಣದ ಹಾದಿಯ ಬಗ್ಗೆ ಹೇಳುತ್ತೀರಾ?

ಸುರೇಶ ಭಾಗವತ : ನಾನು ಭಾಗವತನಾಗಿ ಬೈಂದೂರು ಕಳುವಾಡಿ ಮೇಳದಲ್ಲಿ 2 ವರ್ಷ, ಕಮಲಶಿಲೆ ಮೇಳದಲ್ಲಿ 8 ವರ್ಷ, ಶಿವರಾಜಪುರ ಮೇಳದಲ್ಲಿ 2 ವರ್ಷ, ಬಗ್ವಾಡಿ ಮೇಳದಲ್ಲಿ 2 ವರ್ಷ, ಹಾಲಾಡಿ ಮೇಳದಲ್ಲಿ 2 ವರ್ಷ, ಮಡಾಮಕ್ಕಿ ಮೇಳದಲ್ಲಿ 2 ವರ್ಷ, ಗೋಳಿಗರಡಿ ಮೇಳದಲ್ಲಿ 2 ವರ್ಷ ಹಾಗೂ ಕಳೆದ 11 ವರ್ಷಗಳಿಂದ ಶ್ರೀ ಕ್ಷೇತ್ರ ಸಿಗಂದೂರು ಮೇಳದಲ್ಲಿ ವೃತ್ತಿ ಮಾಡುತ್ತಿದ್ದೇನೆ. ಹಲವಾರು ಹಿರಿಯ ಕಿರಿಯ ಕಲಾವಿದರ ಜೊತೆ ಸಂಚಾರ ಮಾಡಿದ್ದೇನೆ. ಕೋಟ ವೈಕುಂಠ ನಾಯಕ್, ಸೀನ ನಾಯಕರು, ಬೇಗಾರು ಪದ್ಮನಾಭರೊಂದಿಗೆ ಕೆಲಸ ಮಾಡಿದ್ದೇನೆ.

ಭಾಗವತಿಕೆಯ ಜೊತೆಗೆ ವೇಷ, ಚಂಡೆ-ಮದ್ದಲೆಯನ್ನೂ ನಿರ್ವಹಿಸಿದ್ದೇನೆ. ಭೀಷ್ಮ ವಿಜಯದ ಸಾಲ್ವ, ಗದಾಯುದ್ಧದ ಭೀಮ ಮುಂತಾದ ಪಾತ್ರಗಳನ್ನು ಮಾಡಿದ್ದೇನೆ. ಕರಾವಳಿಯ ಸಾಂಪ್ರದಾಯಿಕ ಕಲೆ ಹಾಗೂ ಯಕ್ಷಗಾನದ ಒಂದು ವಿಭಾಗವಾದ ಹೂವಿನ ಕೋಲನ್ನು ಕಳೆದ ಇಪ್ಪತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇನೆ. ಈ ಮೂಲಕ ಈ ಕಲೆಯನ್ನು ಚಾಲ್ತಿಯಲ್ಲಿಟ್ಟು ಮುಂದಿನ ಪೀಳಿಗೆಗೆ ತಿಳಿಸುವುದು ನನ್ನ ಉದ್ದೇಶ, ನಾನು ಮಕ್ಕಳಿಗೆ ಯಕ್ಷಗಾನ ಕಲೆಯನ್ನು ಕಲಿಸುತ್ತಿದ್ದೇನೆ.

ಪ್ರಶ್ನೆ : ನಿಮ್ಮ ಬಂಧು ಮಿತ್ರರ ಹಾಗೂ ಮನೆಯವರ ಸಹಕಾರ ಹೇಗಿದೆ?

ಸುರೇಶ ಭಾಗವತ : ನನ್ನ ಪತ್ನಿ ಯಶೋಧಾ ಹಾಗೂ ಮಕ್ಕಳಾದ ಮೇಘನಾ ಹಾಗೂ ಗಗನರ ಸಹಕಾರ ಪ್ರೋತ್ಸಾಹ ಇಲ್ಲದಿದ್ದರೆ ನಾನು ಈ ದಿನ ಇಷ್ಟು ಕೆಲಸ ಮಾಡಲು ಸಾಧ್ಯವಿರುತ್ತಿರಲಿಲ್ಲ. ಹಾಗೂ ಸಹೋದ್ಯೋಗಿಗಳ ಸಹಕಾರ, ಬಂಧು-ಮಿತ್ರರ ಪ್ರೋತ್ಸಾಹಕ್ಕೆ ನಾನು ಚಿರಋಣಿ. ನಾನು ಇಷ್ಟು ವರ್ಷಗಳ ಕಾಲ ಭಾಗವತಿಕೆ ಮಾಡುತ್ತಿದ್ದೇನೆ ಎಂದರೆ ಹಿತೈಷಿಗಳಾದ ಪದ್ಮನಾಭ ಉಂಗ್ರಪಳ್ಳಿಯವರೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ಪ್ರಶ್ನೆ : ನಿಮಗೆ ಸಂದಿರುವ ಸನ್ಮಾನಗಳ ಬಗ್ಗೆ ಏನು ಹೇಳುತ್ತೀರಿ?

ಸುರೇಶ ಭಾಗವತ : 1989ರಲ್ಲಿ ಭಾರತ ಸರಕಾರದ ಕೇಂದ್ರ ಜಾನಪದ ಅಕಾಡೆಮಿಯು ಮಂದರ್ತಿಯಲ್ಲಿ ನಡೆಸಿದ ಹೂವಿನ ಕೋಲಿನ ಸ್ಪರ್ಧೆಯಲ್ಲಿ ನನಗೆ ಮೊದಲ ಬಹುಮಾನ ಬಂತು. ಕಲಾವಿದರಿಗೆ ಬಹುಮಾನಕ್ಕಿಂತ ಅಭಿಮಾನಿಗಳ ಪ್ರೀತಿಯೇ ಶ್ರೀರಕ್ಷೆ ಎಂಬುದು ನನ್ನ ನಂಬಿಕೆ.

ಪ್ರಶ್ನೆ : ಯಕ್ಷಗಾನದ ಕಿರಿಯ ಕಲಾವಿದರಿಗೆ ನಿಮ್ಮ ಸಂದೇಶವೇನು?

ಸುರೇಶ ಭಾಗವತ : ಈಗೀಗ ಯಕ್ಷಗಾನ ಅಗತ್ಯಕ್ಕಿಂತ ಹೆಚ್ಚಾಗಿ ವ್ಯಾಪಾರೀಕರಣವಾಗುತ್ತಿರುವುದು ಒಂದು ವಿಷಾದದ ಸಂಗತಿ. ವಿದ್ಯಾರ್ಥಿಗಳು ಹಾಗೂ ಈಗ ಯಕ್ಷಗಾನಕ್ಕೆ ಕಾಲಿಟ್ಟವರು ಪಾರ್ತಿಸುಬ್ಬ, ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳು ಮುಂತಾದವರು ರಚಿಸಿದ ಹಳೆಯ ಪ್ರಸಂಗಗಳನ್ನು ಅಭ್ಯಾಸ ಮಾಡಿದರೆ ಹೊಸ ಪ್ರಸಂಗಗಳಲ್ಲಿ ಅಭಿನಯಿಸುವುದು ಸುಲಭವಾಗುತ್ತದೆ. ಈಗೀಗ ಕಲಾವಿದರ ಕೊರತೆ ಎದುರಾಗಿದ್ದು, ಯಕ್ಷಗಾನ ಶಿಕ್ಷಣ ಕೇಂದ್ರಗಳು, ಅಕಾಡೆಮಿ ಮತ್ತು ಸರಕಾರ, ಯುವ ಪೀಳಿಗೆಯನ್ನು ಯಕ್ಷಗಾನ ಕಲೆಯತ್ತ ಆಕರ್ಷಿತವಾಗಲು ಕೆಲಸ ಮಾಡಬೇಕಾಗಿದೆ. ಹಾಗೆಯೇ ಇನ್ನೂ ಹೆಚ್ಚು ಹೆಚ್ಚು ಯಕ್ಷಗಾನಗಳು ಎಲ್ಲಾ ಕಡೆಗಳಲ್ಲಿಯೂ ಪ್ರಸರಿಸಿ ಕಲಾವಿದರ ಜೀವನ ನಿರ್ವಹಣೆಗೂ ಸಹಕಾರಿಯಾಗಬೇಕು.

*********************

ಬಾರ್ಕೂರು ಸುರೇಶ ಭಾಗವತರ ಭಾಗವತಿಕೆಯನ್ನು ಇಲ್ಲಿ ನೋಡಿರಿ



ಕೃಪೆ : http://kannada.oneindia.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ